1805-94. ಸೂಯೆಜ್ ಕಾಲುವೆ ನಿರ್ಮಿಸಿದ ಪ್ರಪಂಚಖ್ಯಾತ ಫ್ರೆಂಚ್ ಎಂಜಿನಿಯರ್ ಹಾಗೂ ರಾಯಭಾರಿ. ಫ್ರಾನ್ಸಿನ ಆಡಳಿತ ವ್ಯವಸ್ಥೆಯಲ್ಲಿ ಪರಂಪರೆಯಿಂದ ಹೆಸರು ಪಡೆದಿದ್ದ ಶ್ರೀಮಂತ ಲೆಸೆಪ್ಸ್ ಕುಟುಂಬದಲ್ಲಿ 1805 ನವೆಂಬರ್ 19ರಂದು ವರ್ಸೈಲ್ಸ್ ಎಂಬಲ್ಲಿ ಜನಿಸಿದ. 1825ರಲ್ಲಿ ಲಿಸ್ಬನ್‍ನಲ್ಲಿ ಸಹಾಯಕ ಉಪಸಲಹೆಗಾರನಾಗಿ ಸರ್ಕಾರಿ ಆಡಳಿತ ಕ್ಷೇತ್ರವನ್ನು ಪ್ರವೇಶಿಸಿದ. 1828ರಲ್ಲಿ ಈತನನ್ನು ಟೂನಿಸ್‍ಗೆ ಅನಂತರ 1832ರಲ್ಲಿ ಅಲೆಕ್ಸಾಂಡ್ರಿಯಕ್ಕೆ ಕಳುಹಿಸಲಾಯಿತು. ಅಲೆಕ್ಸಾಂಡ್ರಿಯದಲ್ಲಿ ಈಜಿಪ್ಟ್‍ನ ಟರ್ಕಿಷ್ ವೈಸ್‍ರಾಯ್ ಆಗಿದ್ದ ಮಹಮ್ಮದ್ ಅಲಿ ಹಾಗೂ ಅವನ ಮಗ ಸೈಯದ್ ಪಾಶಾ ಇವರ ಪರಿಚಯವಾಯಿತು. ನೆಪೋಲಿಯನ್ನನ ಮುಖ್ಯ ಎಂಜಿನಿಯರುಗಳಲ್ಲಿ ಒಬ್ಬನಾದ ಜೆ.ಎಮ್.ಲಿಪಿರೆಯ ಸೂಯಜ್ ಕಾಲುವೆಯ ವರದಿಯನ್ನು ಓದಿ, ಲಿಪಿರೆ ಆರಂಭಿಸಿದ ಕೆಲಸವನ್ನು ಪೂರ್ಣಗೊಳಿಸಲು ಆಲೋಚಿಸಿದ. ಅದರೆ ತತ್‍ಕ್ಷಣದಲ್ಲಿ ಆ ಕೆಲಸ ನೆರವೇರಲಿಲ್ಲ. 1833-37ರ ತನಕ ಕೈರೋದಲ್ಲಿ ಸಲಹೆಗಾರನಾಗಿದ್ದ. ಅಲ್ಲಿ ಪ್ಲೇಗ್ ಹಾವಳಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿ ಜನಪ್ರಿಯನಾದ. ಎರಡು ವರ್ಷಗಳ ಅನಂತರ ಈತನನ್ನು ರೋಟರ್‍ಡಾಮ್‍ಗೆ ವರ್ಗಮಾಡಲಾಯಿತು. ಅನಂತರ ಈತ ಮ್ಯಾಲಾಗ ಹಾಗೂ ಬಾರ್ಸಿಲೋನಗಳಲ್ಲಿ ಸೇವೆಸಲ್ಲಿಸಿದ. ಬಾರ್ಸಿಲೋನಾದಲ್ಲಿ ಇವನನ್ನು ಕೌನ್ಸಿಲ್ ಜನರಲ್ ಹುದ್ದೆಗೇರಿಸಲಾಯಿತು. 1848-49ರಲ್ಲಿ ಮ್ಯಾಡ್ರಿಡ್‍ನಲ್ಲಿ ಫ್ರಾನ್ಸಿನ ಮಂತ್ರಿಯಾಗಿದ್ದ.

ಈಜಿಪ್ಟಿನ ವೈಸ್‍ರಾಯ್ ಆಗಿದ್ದ ಸೈಯದ್‍ಪಾಶಾನ ಆಮಂತ್ರಣದ ಮೇರೆಗೆ, ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರವನ್ನು ಕೂಡಿಸುವ ಸೂಯೆಜ್ ಕಾಲುವೆಯ ನಿರ್ಮಾಣಕಾರ್ಯ ಯೋಜನೆಯ ಕರಡನ್ನು 1854ರಲ್ಲಿ ಸಿದ್ಧಗೊಳಿಸಿ 1856ರಲ್ಲಿ ಅಂತಾರಾಷ್ಟ್ರೀಯ ಎಂಜಿನಿಯರ್ ಸಮಿತಿಯಿಂದ ಒಪ್ಪಿಗೆ ಪಡೆದು ಕಾರ್ಯಾರಂಭ ಮಾಡಿದ. ಈ ಯೋಜನೆ ಫ್ರಾನ್ಸಿನ ಜನತೆಯನ್ನು ಆಕರ್ಷಿಸಿತು. ಯೋಜನೆಗೆ ತಗಲುವ ವೆಚ್ಚದ ಅರ್ಧಕ್ಕಿಂತ ಹೆಚ್ಚು ಮೊತ್ತವನ್ನು ಫ್ರೆಂಚ್ ಜನತೆ ನೀಡಿತು. 1859 ಏಪ್ರಿಲ್ 25 ಸೂಯೆಜ್ ಕಾಲುವೆಯ ಗುದ್ದಲಿ ಪೂಜೆಯನ್ನು ಸ್ವಹಸ್ತದಿಂದ ನೆರವೇರಿಸಿ ಹತ್ತು ವರ್ಷಗಳ ನಿರಂತರ ಶ್ರಮದಿಂದ 160ಕಿಮೀ ಉದ್ದದ ಕಾಲುವೆಯ ನಿರ್ಮಾಣಕಾರ್ಯವನ್ನು ಪೂರ್ಣಗೊಳಿಸಿದ. ಈ ಕಾಲುವೆಯ ನಿರ್ಮಾಣದಿಂದಾಗಿ ಇಂಗ್ಲೆಂಡ್ ಹಾಗೂ ಭಾರತದ ನಡುವಣ ದೂರ ಸು. 9700ಕಿಮೀ ಗಳಷ್ಟು ಕಡಮೆಯಾಯಿತು. 1869 ನವೆಂಬರ್ 17ರಂದು ಇದರ ಆರಂಭೋತ್ಸವ ಜರುಗಿತು. ಅನಂತರ 1875ರಲ್ಲಿ ಪ್ರಧಾನಮಂತ್ರಿ ಬೆಂಜಮಿನ್ ಡಿಸ್ರೇಲಿಯ ಮುಂದಾಳುತನದಲ್ಲಿ ಬ್ರಿಟಿಷ್ ಸರ್ಕಾರ ಈಜಿಪ್ಟ್ ವೈಸ್‍ರಾಯ್‍ನಿಂದ ಸೂಯೆಜ್ ಕಾಲುವೆಯ ಷೇರುಗಳ ಒಡೆತನ ಪಡೆದುಕೊಂಡಿತು. ಇದನ್ನು ಬ್ರಿಟಿಷ್ ಸರ್ಕಾರ ಪಡೆಯುವಲ್ಲಿ ಲೆಸೆಪ್ಸ್ ಅಪಾರವಾಗಿ ನೆರವಾದ. 

1879ರಲ್ಲಿ ಪ್ಯಾರಿಸ್‍ನಲ್ಲಿ ಅಂತಾರಾಷ್ಟ್ರೀಯ ಭೌಗೋಳಿಕ ವಿಜ್ಞಾನಗಳ ಸಮ್ಮೇಳನ ಸೇರಿ ಪನಾಮ ಕಾಲುವೆಯನ್ನು ರಚಿಸುವ ಕೆಲಸಕ್ಕೆ ಒಪ್ಪಿಗೆ ನೀಡಿತು. ಆಗ 74 ವರ್ಷಗಳ ವೃದ್ಧ ಲೆಸೆಪ್ಸ್ ಈ ಕಾರ್ಯ ಭಾರವನ್ನು ವಹಿಸಿಕೊಂಡ. 12ವರ್ಷ ನಿರಂತರ ಪರಿಶ್ರಮದಿಂದ ಕೆಲಸ ಸಾಗಿತಾದರೂ ಅಗತ್ಯ ಬಂಡವಾಳದ ಅಭಾವದಿಂದ 1889 ಫೆಬ್ರವರಿ 4ರಂದು ಈ ಕಾರ್ಯ ಸ್ಥಗಿತಗೊಂಡಿತು. ಪನಾಮ ಕಾಲುವೆ ಕಂಪನಿ ದಿವಾಳಿಯಾಯಿತು. 17 ದಶಲಕ್ಷ ಪೌಂಡುಗಳ ವೆಚ್ಚದಲ್ಲಿ ಪೂರ್ತಿಯಾಗ ಬೇಕಾಗಿದ್ದ ಯೋಜನೆ ಅರ್ಧ ಕೂಡ ಮುಗಿಯಲಿಲ್ಲ. ದುಂದುಗಾರಿಕೆಯಾ ಗಿದೆಯೆಂಬ ಹಾಗೂ ಹಣದ ದುರ್ಲಾಭ ಪಡೆದನೆಂಬ ಅವಹೇಳನದ ಟೀಕೆಗಳಿಗೂ ಈತ ಈಡಾದ. ಇವನು ಹಾಗೂ ಇವನ ಮಗ ಚಾಲ್ರ್ಸ್ ಹಣದ ದುರ್ವಿನಿಯೋಗ ಮತ್ತು ವಂಚನೆಯ ಆರೋಪಕ್ಕೆ ಗುರಿಯಾದರು. 1893ರಲ್ಲಿ ವಿಚಾರಣೆ ನಡೆದು ಇಬ್ಬರಿಗೂ 5 ವರ್ಷಗಳ ಜೈಲುಶಿಕ್ಷೆ ವಿಧಿಸಲಾಯಿತು. ಆದರೆ ಚಾಲ್ರ್ಸ್ ಮಾತ್ರ ಜೈಲುಶಿಕ್ಷೆಗೊಳ ಗಾದ. ಅದೇ ವರ್ಷದ ಜೂನ್‍ನಲ್ಲಿ ಈ ಮೊಕದ್ದಮೆ ರಾಜಕೀಯ ಬಣ್ಣ ಪಡೆದುಕೊಂಡಿತು. ಸರ್ಕಾರಿ  ಸದಸ್ಯರು  ಹಾಗೂ  ರಾಜಕೀಯ  ವ್ಯಕ್ತಿಗಳ ಲಂಚಗುಳಿತನವೇ ಯೋಜನೆಯ ಅಪಯಶಸ್ಸಿಗೆ ಕಾರಣವೆಂದು ವಾದಿಸಲಾಯಿತು. ಲೋಕಾಪವಾದಗಳಿಗೆ ಗುರಿಯಾದ ಈತ ತನ್ನ 89ನೆಯ ವಯಸ್ಸಿನಲ್ಲಿ ಲಾ-ಚೆನೈ ಎಂಬಲ್ಲಿ 1894 ಡಿಸೆಂಬರ್ 7 ರಂದು ನಿಧನಹೊಂದಿದ. ಅನಂತರ ಇವನ ಮಗ ಚಾಲ್ರ್ಸ್, ಪನಾಮ ಕಾಲುವೆ ಯೋಜನೆಯನ್ನು ಮುಗಿಸಿ (1914 ಆಗಸ್ಟ್ 4) ಲೆಸೆಪ್ಸ್ ಮನೆತನದ ಗೌರವ ಕಾಪಾಡಿದ. ಇವನಿಗೆ ಅನೇಕ ಗೌರವಗಳು ಲಭ್ಯವಾಗಿದ್ದವು. ಈತ ಫ್ರೆಂಚ್ ಅಕಾಡೆಮಿ ಮತ್ತು ಸೈನ್ಸ್ ಅಕಾಡೆಮಿಯ ಸದಸ್ಯನಾಗಿದ್ದ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ